ಕೆರಾಬಿಡೀ

ಕೀಟವರ್ಗದಲ್ಲಿನ ಕೋಲಿಯಾಪ್ಟರ ಗಣಕ್ಕೆ ಸೇರಿದ ಕೆಲವು ಬಗೆಯ ಜೀರುಂಡೆಗಳ ಕುಟುಂಬ. ಈ ಕುಟುಂಬದ ಕೀಟಗಳನ್ನು ಸಾಮಾನ್ಯವಾಗಿ ನೆಲಜೀರುಂಡೆಗಳೆನ್ನುತ್ತಾರೆ. ಇವು ನಿಶಾಚರಿಗಳು. ಹಗಲಿನಲ್ಲಿ ಮರದ ಪೊಟರೆ ಇಲ್ಲವೆ ನೆಲದಲ್ಲಿ ನಿರ್ಮಿಸಿಕೊಂಡ ಗೂಡುಗಳಲ್ಲಿ ಅವಿತುಕೊಂಡಿರುತ್ತವೆ. ಕಾಲುಗಳ ಮುಂಭಾಗದಲ್ಲಿ (ಟಾರ್ಸಿ) ಕೀಲುಗಳಿರುವುದು, ದಾರದಂಥ ಕುಡಿಮೀಸೆಗಳು, ಬಹಳ ಕ್ಷೀಣ ಗೊಂಡ ರೆಕ್ಕೆಗಳು, ಮಧ್ಯಭಾಗದಲ್ಲಿ ಕೂಡಿಕೊಂಡು ದೃಢವಾದ ಕವಚದಂತೆ ಮಾರ್ಪಟ್ಟಿರುವ ಎರಡನೆಯ ಜೊತೆ ರೆಕ್ಕೆಗಳು (ಎಲಿಟ್ರ) ಈ ಕೀಟಗಳ ಪ್ರಮುಖ ಲಕ್ಷಣಗಳು. ಕೆಲವು ಜೀರುಂಡೆಗಳ ಕವಚದ ಮೇಲೆ ಉದ್ದುದ್ದವಾದ ಏಣುಗಳಿವೆ. ಈ ಕೀಟಗಳು ಸಾಮಾನ್ಯವಾಗಿ ಥಳಥಳಿಸುವ ಕಪ್ಪು ಅಥವಾ ಕಂದು ಬಣ್ಣದವು. ಕೆಲವು ಕೀಟಗಳಲ್ಲಿ ಹಸಿರು ಮತ್ತು ನೀಲಿ ಬಣ್ಣವಿರಬಹುದು. ಇತರ ಬಗೆಯ ಕೀಟಗಳನ್ನು ತಿಂದು ಜೀವಿಸುವ ಈ ಜೀರುಂಡೆಗಳು ಕೃಷಿಪಿಡುಗುಗಳಾದ ಹಲವಾರು ಬಗೆಯ ಕೀಟಗಳನ್ನು ತಿಂದು ಜೀವಿಸುವುದರಿಂದ ಮಾನವನಿಗೆ ಉಪಕಾರಿಗಳೆನಿಸಿವೆ. ಬಲು ಸಾಮಾನ್ಯವಾಗಿ ಸಿಕ್ಕುವ ನೆಲಜೀರುಂಡೆ ಕ್ಯಾಲಸೋಮ ಸ್ಕ್ರುಟೇಟರ್ ಎಂಬುದು. ಸುಂದರವಾಗಿರುವ ಇದಕ್ಕೆ ಸರ್ಚರ್ ಎಂಬ ರೂಢಿನಾಮವಿದೆ. ಇದರ ಕವಚದ ಬಣ್ಣ ಹಸಿರು. ಅದರ ಅಂಚು ಕೆಂಪಗಿರುತ್ತದೆ. ದೇಹದ ಉಳಿದ ಭಾಗ ಬಂಗಾರ, ನೀಲಿ ಅಥವಾ ತಾಮ್ರದ ಬಣ್ಣಕ್ಕಿರಬಹುದು. ಇನ್ನೊಂದು ನೆಲಜೀರುಂಡೆಯಾದ ಕ್ಯಾಲಸೋಮ ಸೈಕೊಫ್ಯಾಂಟ ಎಂಬುದು ಯೂರೋಪಿನಲ್ಲಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕೃಷಿಪೀಡೆಗಳಾದ ಜಿಪ್ಸಿ ಪತಂಗಗಳು ಮತ್ತು ಕಂದು ಬಾಲದ ಪತಂಗಗಳನ್ನು ನಾಶಮಾಡುವುದಕ್ಕೆ ಇದನ್ನು ಯೂರೋಪಿನಿಂದ ಅಮೆರಿಕಕ್ಕೆ ತರಲಾಯಿತು. ಹಾರ್ಪಾಲಸ್ ಕ್ಯಾಲೆಜಿನೋಸಸ್ ಮತ್ತು ಪಾಯಿಸಿಲಸ್ ಲ್ಯೂಕೊಬ್ಲಾಂಡಸ್‍ಗಳು ಅಮೆರಿಕಾ ಸಂಯುಕ್ತಸಂಸ್ಥಾನದಲ್ಲಿ ಸಿಕ್ಕುವ ಇತರ ನೆಲಜೀರುಂಡೆಗಳು. ಭಾರತದಲ್ಲಿ ಅಂತಿಯ ಸೆಕ್ಸ್‍ಗಟೇಟ ಮತ್ತು ಫೀರಾಪ್ಸೋಫಸ್ ಹಿಲೇರಿಸ್ ಎಂಬ ಎರಡು ಬಗೆಯ ನೆಲಜೀರುಂಡೆಗಳು ಕಾಣಬರುತ್ತವೆ. ಇವುಗಳಲ್ಲಿ ಎರಡನೆಯ ಬಗೆಯದು ನೆಲದ ಬಿರುಕುಗಳಲ್ಲಿ ವಾಸಿಸುತ್ತದೆ. ಇದರ ದೇಹದ ಬಣ್ಣ ಕಪ್ಪು. ಅಲ್ಲಲ್ಲೆ ಹಳದಿ ಪಟ್ಟೆಗಳಿವೆ. 
												(ಜಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ